ಕೊಲೆಂಬೋಲ

ಕೀಟವರ್ಗದ ಆಪ್ಟೆರಿಗೋಟ ಉಪವರ್ಗಕ್ಕೆ ಸೇರಿದ ಒಂದು ಪ್ರಮುಖ ಗಣ. ಇದಕ್ಕೆ ಸೇರಿದ ಕೀಟಗಳನ್ನು ಸಾಮಾನ್ಯವಾಗಿ ಸ್ಪ್ರಿಂಗ್‍ಟೈಲ್ಸ್ ಎನ್ನುತ್ತಾರೆ. ದೇಹದ ಹಿಂತುದಿಯಲ್ಲಿ ಫಕ್ರ್ಯುಲ ಎಂಬ ಕವಲೊಡೆದ ರಚನೆಯಿದೆ. ಇದರ ಸಹಾಯದಿಂದ ಇವು ಕುಪ್ಪಳಿಸಬಲ್ಲುವು. ಇದರಿಂದಲೇ ಈ ಕೀಟಗಳಿಗೆ ಸ್ಪ್ರಿಂಗ್ ಟೈಲ್ಸ್ ಎಂಬ ಹೆಸರು ಬಂದಿದೆ. ಇವು ಬಹಳ ಸೂಕ್ಷ್ಮಗಾತ್ರದ ಕೀಟಗಳು(ದೇಹದ ಉದ್ದ ಸುಮಾರು 1-5 ಮಿಮೀ.). ವಿವಿಧ ಬಗೆಯ ನೆಲೆಗಳಲ್ಲಿ ವಾಸಿಸುತ್ತವೆ. ತೇವಪೂರಿತ ಸ್ಥಳಗಳಲ್ಲಿ ಹೆಚ್ಚು ಕೊಳೆಯುವ ಸಸ್ಯಭಾಗಗಳು, ಹಸಿ ಮಣ್ಣು, ಕೆರೆ, ನದಿಗಳ ದಂಡೆ, ರಸಯುಕ್ತ ಶಿಲೀಂಧ್ರಗಳ ಅಡಿಯಲ್ಲಿ ಇವು ಕಾಣಬರುತ್ತವೆ. ಕೆಲವು ಬಗೆಗಳು ನೀರಿನಲ್ಲೂ ಮಂಜುಗಡ್ಡೆಯ ಮೇಲೂ ಇರಬಹುದು.

ದೇಹದ ಬಣ್ಣ ಕಪ್ಪು, ಬೂದಿ, ಬಿಳಿ, ನೀಲಿ ಇತ್ಯಾದಿ ವೈವಿಧ್ಯಪೂರ್ಣ. ದೇಹದ ಮೇಲೆ ಹುರುಪೆ ಇಲ್ಲವೆ ಕೂದಲಿನ ಹೊದಿಕೆಯಿರಬಹುದು. ಕೆಲವೊಮ್ಮೆ ಯಾವ ಬಗೆಯ ಹೊದಿಕೆಯೂ ಇಲ್ಲದಿರಬಹುದು. ವದನಾಂಗಗಳು ಆಹಾರವನ್ನು ಕಡಿಯುವುದಕ್ಕೆ ಅನುಕೂಲವಾಗಿವೆ. ಕೆನ್ನೆಗಳು (ಜೀನೆ) ತಲೆಯ ಆಚೀಚೆ ಬೆಳೆದಿರುವುದರಿಂದ ವದನಾಂಗಗಳು ಆವರಿಸಲ್ಪಟ್ಟು ಹೊರಗೆ ಸುಲಭವಾಗಿ ಕಾಣುವುದಿಲ್ಲ. ಸ್ಪರ್ಶಾಂಗ (ಆಂಟೆನ) 4-6 ಖಂಡಗಳನ್ನು ಒಳಗೊಂಡಿದೆ. ಈ ಕೀಟಗಳಲ್ಲಿ ಕಣ್ಣುಗಳು ಇರಬಹುದು ಅಥವಾ ಇಲ್ಲದಿರಬಹುದು. ಉದರ ಭಾಗ 4-6 ಖಂಡಗಳನ್ನೊಳಗೊಂಡಿದೆ. ಇದರಲ್ಲಿ 4 ನೆಯ ಇಲ್ಲವೆ 5ನೆಯ ಖಂಡದಲ್ಲೆ ಫಕ್ರ್ಯುಲ ಇರುವುದು. ಕೀಟ ಸುಮ್ಮನೆ ಕುಳಿತಿರುವಾಗ ಫಕ್ರ್ಯುಲ ಉದರದ ಮೂರನೆಯ ಖಂಡದ ತಳಭಾಗದಲ್ಲಿರುವ ಟೆನಾಕ್ಯುಲಮ್ ಎಂಬ ರಚನೆಗೆ ಅಂಟಿಕೊಂಡಿರುತ್ತದೆ. ಕೀಟ ಕುಪ್ಪಳಿಸುವಾಗ ಫಕ್ರ್ಯುಲವನ್ನು ಹಿಂಭಾಗಕ್ಕೂ ಕೆಳಕ್ಕೂ ಚಾಚಿ ನೆಲದ ಮೇಲೆ ಒತ್ತಿ ಹಾರುತ್ತದೆ. ಸುಮಾರು 5-6 ಮಿಮೀ. ಉದ್ದವಿರುವ ಕೀಟವೊಂದು ಸುಮಾರು 10-12 ಮಿಮೀ. ದೂರಕ್ಕೆ ನೆಗೆಯಬಲ್ಲುದು.
ಕೊಲೆಂಬೋಲ ಗಣದ ಕೀಟಗಳ ಆಹಾರ ಪ್ರಧಾನವಾಗಿ ಸಸ್ಯಮೂಲದ್ದು. ಕೊಳೆಯುವ ಎಲೆ, ಬೂಷ್ಟು, ಕಲ್ಲುಹೂ, ಬೀಜಕಣಗಳು, ಪರಾಗ, ನೀರಿನಲ್ಲಿ ಬೆಳೆಯುವ ಪಾಚಿ ಮುಂತಾದವೇ ಇವುಗಳ ಆಹಾರ. ಕೊಳೆಯುವ ಪ್ರಾಣಿವಿಶೇಷಗಳನ್ನು ಮತ್ತು ಇತರ ಕೀಟಗಳನ್ನು ತಿನ್ನುವ ಕೀಟಗಳೂ ಇಲ್ಲದಿಲ್ಲ.

ಇವುಗಳ ಜೀವನಕ್ರಮದ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿಲ್ಲ. ಇವು ಮಣ್ಣು, ಗೊಬ್ಬರದ ಗುಂಡಿ. ತೊಗಟೆಗಳ ತಳಭಾಗ ಮುಂತಾದ ಸ್ಥಳಗಳಲ್ಲಿ ಒಂಟೊಂಟಿಯಾಗಿಯೊ ಇಲ್ಲವೆ ಗುಂಪುಗಳಲ್ಲಿಯೊ ಮೊಟ್ಟೆಯಿಡುತ್ತವೆ. ಮೊಟ್ಟೆಯೊಡೆದು ಹೊರಬರುವ ಮರಿಗಳು ಪ್ರೌಢಕೀಟಗಳಂತೆಯೆ ಕಾಣುತ್ತವೆ. ಈ ಕೀಟಗಳಲ್ಲಿ ಸಾಮಾನ್ಯವಾಗಿ ರೂಪ ಪರಿವರ್ತನೆ ಇಲ್ಲ. 

ಈ ಗಣವನ್ನು ಆತ್ರ್ರೊಪ್ಲಿಯೋನ, ಆಕ್ಟಲೆಟಾಯ್ಡಿಯ ಮತ್ತು ಸಿಂಫೈಪ್ಲಿಯೋನ, ಎಂಬ ಮೂರು ಉಪಗಣಗಳಾಗಿ ವಿಂಗಡಿಸಲಾಗಿದೆ. ಇವುಗಳಿಗೆ ಸೇರಿದಂತೆ ಎಂಟಮಾಬ್ರೈಯಿಡೀ, ಪಾಡ್ಯುರಿಡೀ, ಸ್ಮಿಂತುರಿಡೀ, ಆಕ್ಟಾಲೆಟಿಡೀ ಮತ್ತು ನೀಲಿಡೀ ಎಂಬ ಐದು ಕುಟುಂಬಗಳಿವೆ. 											 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ